ಅಭಿಪ್ರಾಯ / ಸಲಹೆಗಳು

ವಿಶಿಷ್ಟ ಸಾಧನೆಗಳು

  • 1986ರಷ್ಟು ಹಿಂದೆಯೇ ಸಲ್ಲಿಕೆಯಾದ ಡಾ.ಸರೋಜಿನಿ ಮಹಿಷಿ ವರದಿಯನ್ನು ಇಂದಿನ ಕಾಲಘಟ್ಟಕ್ಕೆ ಅನ್ವಯಿಸುವಂತೆ ಪರಿಷ್ಕರಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂದಿನ ಸಾಮಾಜಿಕ ಸ್ಥಿತಿಗತಿಗಳ ಕನ್ನಡ ಪರವಾದ ನಿರೀಕ್ಷೆಗಳನ್ನು ಸಮಗ್ರವಾಗಿ ಅವಲೋಕಿಸಿ ಫೆಬ್ರವರಿ 2017ರಲ್ಲಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಇದರ ಫಲಶ್ರುತಿಯಾಗಿ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಕಲ್ಪಿಸುವ ಮಹತ್ವದ ನಿರ್ಣಯವನ್ನು ಸರ್ಕಾರವು ತೆಗೆದುಕೊಂಡಿದೆ.

  • ಸರ್ಕಾರಿ ಶಾಲೆಗಳನ್ನು ಎಲ್ಲಾ ಆಯಾಮಗಳಲ್ಲಿ ಸಬಲೀಕರಣಗೊಳಿಸುವ ಮೂಲಕ ಸಮರ್ಥವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ಷೇತ್ರಾಧ್ಯಯನ, ತಜ್ಞರೊಂದಿಗಿನ ಚರ್ಚೆಗಳ ಆಧಾರದಲ್ಲಿ ತಯಾರಿಸಲಾದ 14 ಅಂಶಗಳ ವರದಿಯನ್ನು ದಿನಾಂಕ:04-09-2017ರಲ್ಲಿ ಪ್ರಾಧಿಕಾರವು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಸರ್ಕಾರಿ ಶಾಲೆಗಳ ವರದಿಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆ.

  • ಕನ್ನಡ ಭಾಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಗುಣತ್ಮಕವಾದ ಹಾಗೂ ಮೌಲ್ಯಯುತವಾದ ಶಿಕ್ಷಣ ನೀಡುವಲ್ಲಿ ವಿದ್ಯಾರ್ಥಿ ಕೇಂದ್ರಿತ ಬೋಧನಾ ಪದ್ದತಿಯನ್ನು ಜಾರಿಗೆ ತರುವ ಸಂಬಂಧ ಪಠ್ಯ ಕ್ರಮಗಳನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ ದೊಡ್ಡದಿದೆ. ಸಾಂಪ್ರದಾಯಿಕ ಪದವಿ ತರಗತಿಗಳಲ್ಲಿ ಕನಿಷ್ಠ ಮೊದಲ 4ನೇ ಸೆಮಿಸ್ಟರ್‍ಗಳಲ್ಲಿ ಹಾಗೂ ವೃತ್ತಿಪರ ಕೋರ್ಸ್‍ಗಳಲ್ಲಿ ಕನಿಷ್ಟ 2 ಸೆಮಿಸ್ಟರ್‍ಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಬೋಧಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೇಮಿಸಿದ ಡಾ.ಹಿ.ಚಿ.ಬೋರಲಿಂಗಯ್ಯರವರ ಸಮಿತಿ ಸ್ಪಷ್ಟ ಶಿಫಾರಸ್ಸನ್ನು ಮಾಡಿದೆ. ಇದರ ಸಮರ್ಪಕ ಅನುಷ್ಠಾನದ ಕುರಿತಂತೆ ಪ್ರಸ್ತುತ ಸಾಲಿನಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಒತ್ತಡ ಹಾಕುವುದಲ್ಲದೇ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಈ ಎಲ್ಲಾ ಖಾಸಗಿ, ಡೀಮ್ಡ್ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿಯೂ ಏಕರೂಪ ಪಠ್ಯಕ್ರಮವನ್ನು ಜಾರಿಗೆ ತರುವ ಕುರಿತಂತೆ ಹಾಗೂ ಕನಿಷ್ಟ ಅಂಕಗಳನ್ನು ಪಡೆಯದೇ ಇರುವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಪ್ರಾಧಿಕಾರ ಕಾರಣವಾಗಿದೆ. ಹೊರರಾಜ್ಯದ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಪ್ರಾಧಿಕಾರದ ನಿಲುವಿಗೆ ಈ ಫಲಿತಾಂಶ ದೊರೆತಿದ್ದು, ಸರ್ಕಾರ ಪಠ್ಯ ಪುಸ್ತಕ ರಚನೆ ಸಮಿತಿಯನ್ನು ರಚಿಸಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉನ್ನತ ಅನುಷ್ಠಾನ ಸಮಿತಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

  • ನಿಯಂತ್ರಣವಿಲ್ಲದ ರೀತಿಯಲ್ಲಿ ನಿರ್ವಹಣೆಯಾಗುತ್ತಿರುವ ಸರ್ಕಾರಿ ಜಾಲತಾಣಗಳಲ್ಲಿ ಏಕರೂಪ ಶಿಷ್ಠತೆಯನ್ನು ಜಾರಿ ತರುವ ಅನಿವಾರ್ಯತೆ ಇದೆ. ಕನ್ನಡ ಭಾಷೆಗೆ ಸಿಗಬೇಕಾದ ಪ್ರಾತಿನಿಧ್ಯವನ್ನು ಸರ್ಕಾರಿ ಜಾಲತಾಣಗಳು ಕಲ್ಪಿಸುತ್ತಿಲ್ಲ. ಹಾಗಾಗಿ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವ ಜನ ಸಾಮಾನ್ಯರಲ್ಲಿ ಸರ್ಕಾರಿ ಜಾಲತಾಣಗಳು, ಮೊಬೈಲ್ ಆಪ್‍ಗಳಲ್ಲಿ ಕನ್ನಡಕ್ಕೆ ಸಿಗುತ್ತಿರುವ ಪ್ರಾತಿನಿಧ್ಯದ ಕುರಿತಂತೆ ಈಗಾಗಲೇ ಸಿನಿಕತೆ ಅವರಿಸುತ್ತಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾಧಿಕಾರ ಸರ್ಕಾರಿ ಜಾಲತಾಣಗಳಲ್ಲಿ ಏಕರೂಪ ಶಿಷ್ಠತೆಯನ್ನು ತರುವ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕನ್ನಡವೇ ಪ್ರಧಾನವಾಗಿ ಕಾಣುವ, ಏಕರೂಪ ಶಿಷ್ಠತೆಯನ್ನು ಹೊಂದಿರುವ ಸರ್ಕಾರಿ ಜಾಲತಾಣಗಳು ಮುಂದಿನ ದಿನಗಳಲ್ಲಿ ನಿಜವಾಗುವ ದಿನಗಳು ದೂರವಿಲ್ಲ. ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳು 2019-20 ನೇ ಆಯವ್ಯಯ ಘೋಷಣೆಯನ್ನು ಸಹಾ ಮಾಡಿದ್ದಾರೆ.

  • ಕನ್ನಡ ಭಾಷಾ ಕಲಿಕಾ ಕಾಯ್ದೆ 2015 ರನುಸಾರ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಕಲಿಸಬೇಕಾದ್ದು ಕಡ್ಡಾಯವಾಗಿದ್ದು, ಇದನ್ನು ಅನುಷ್ಠಾನಗೊಳಿಸುವಲ್ಲಿ ಶಿಕ್ಷಣ ಇಲಾಖೆಯು ವಿಳಂಬ ನೀತಿ ಅನುಸರಿಸುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಕಠಿಣ ರೀತಿಯಲ್ಲಿ ಆಗ್ರಹಿಸುವ ಮೂಲಕ ಈ ನಿಯಮ ಅನುಷ್ಠಾನಕ್ಕೆ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದೆ. ದಿ: 20-07-2017ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತಾದ ವಿಶಿಷ್ಟ ನಿಯಮಗಳನ್ನು ಸರ್ಕಾರದ ಅಧಿಸೂಚನೆ ಮೂಲಕ ಹೊರಡಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದೆ.

  • ಶಿಕ್ಷಣದಲ್ಲಿ ಹೊರನಾಡು ಕನ್ನಡಿಗರಿಗೆ ಮೀಸಲಾತಿ ಸಿಕ್ಕರಷ್ಟೇ ಸಾಲದು. ಹೊರರಾಜ್ಯದಲ್ಲಿ ಕನ್ನಡ ಉಳಿಯಬೇಕಾದ ಈ ಆಶಯ ಅನುಷ್ಠಾನವಾಗಬೇಕಾದರೆ ಹೊರನಾಡು ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದು ಪ್ರಾಧಿಕಾರದ ನಿರಂತರ ಅಗ್ರಹವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಪದೇ ಪದೇ ಒತ್ತಾಯಿಸುವ ಮೂಲಕ ಘನ ಸರ್ಕಾರ ದಿನಾಂಕ:06-07-2017 ರಲ್ಲಿ ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಶೇ.5ರ ಸಮತಳ ಮೀಸಲಾತಿ ಕಲ್ಪಿಸುವ ಆದೇಶ ಹೊರಡಿಸಿದೆ. ಹೊರರಾಜ್ಯದಲ್ಲಿ ಕನ್ನಡಿಗ ವಿದ್ಯಾರ್ಥಿಗಳನ್ನು ಪ್ರತಿವರ್ಷವೂ ಪುರಸ್ಕರಿಸುವ ಮೂಲಕ ಕನ್ನಡವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವ ಪ್ರಾಧಿಕಾರಕ್ಕೆ ಇದು ನಿಜಕ್ಕೂ ದೊಡ್ಡ ಗೆಲುವಾಗಿದೆ.

  • ರಾಜ್ಯದ ಬಹುಪಾಲು ಜಿಲ್ಲಾಡಳಿತಗಳಲ್ಲಿ ಕನ್ನಡ ಅನುಷ್ಠಾನ ಕುರಿತಾದ ಪರಿಶೀಲನೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಲಾಗಿದೆ. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸುವ ಕುರಿತಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.

  • ಇದಲ್ಲದೇ ಹಲವು ಕೇಂದ್ರೋದ್ಯಮಗಳು, ಬ್ಯಾಂಕ್‍ಗಳಿಗೆ ಭೇಟಿ ನೀಡಿ, ಕನ್ನಡ ಭಾಷಾ ಅನುಷ್ಠಾನಕ್ಕೆ ಅಗ್ರಹಿಸಲಾಗಿದೆ. ಬ್ಯಾಂಕರ್ಸ್ ಸಮಿತಿ, ಲೀಡ್ ಬ್ಯಾಂಕ್‍ಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಅಗತ್ಯತೆಗಳಗನುಗುಣವಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ಇತ್ತೀಚಿನ ನವೀಕರಣ​ : 14-05-2019 02:37 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080